ಹೆಮ್ಮಿಗೆ ದೇಶಿಕಾಚಾರ್ಯ
	1902-66. ಪ್ರಸಿದ್ಧ ವಿದ್ವಾಂಸರು. ಹುಟ್ಟಿದ್ದು ಚಾಮರಾಜನಗರ ತಾಲ್ಲೂಕಿನ ಹೆಮ್ಮಿಗೆಯಲ್ಲಿ. ಮೊದಲಿಗೆ ತಂದೆ ಹೆಮ್ಮಿಗೆ ವೇದಾಂತ ಕೃಷ್ಣಮಾಚಾರ್ಯರಲ್ಲಿ, ಅನಂತರ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿ, ಹಿಂದಿನ ಅಪ್ಪರ್ ಸೆಕೆಂಡರಿ ಪರೀಕ್ಷೆಯಲ್ಲೂ ಕನ್ನಡ ಪಂಡಿತ ಪರೀಕ್ಷೆಯಲ್ಲೂ ರಾಜ್ಯಕ್ಕೇ ಮೊದಲ ಶ್ರೇಣಿಯಲ್ಲಿ ತೇರ್ಗಡೆಯಾದರು. ಇವರಿಗೆ ಸಂಸ್ಕøತ ವ್ಯಾಸಂಗ ಪರಂಪರಾಗತವಾಗಿ ಬಂದಿತ್ತಾಗಿ ಮೈಸೂರಿನ ಸಂಸ್ಕøತ ಪಾಠಶಾಲೆಯಲ್ಲಿ ವ್ಯಾಸಂಗಮಾಡಿ ಅಸಾಧಾರಣ ಪಾಂಡಿತ್ಯವನ್ನೂ ಸಂಪಾದಿಸಿಕೊಂಡರು. ಜೊತೆಗೆ ಇಂಗ್ಲಿಷನ್ನು ಅಭ್ಯಸಿಸಿ ಅದರಲ್ಲೂ ಪರಿಣತಿಯನ್ನು ಪಡೆದುಕೊಂಡರು. ಮನೆಮಾತು ತಮಿಳು. ವಿದ್ಯಾ ಇಲಾಖೆಗೆ ಸೇರಿ ಅಕ್ಕಿಹೆಬ್ಬಾಳು, ತಲಕಾಡು, ಕುದೇರು ಮಾಧ್ಯಮಿಕ ಶಾಲೆಗಳಲ್ಲಿ ಉಪಾಧ್ಯಾಯರಾಗಿ ಕೊನೆಗೆ ಮುಖ್ಯೋಪಾಧ್ಯಾಯರಾಗಿ ಅನಂತರ ಕೋಲಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಪಂಡಿತರಾದರು. ಉಪಾಧ್ಯಾಯ ವೃತ್ತಿಯ ಜೊತೆಗೆ ಇವರು ರಾಮಾಯಣ-ಭಾರತ ಮೊದಲಾದವುಗಳ ಪಾರಾಯಣವನ್ನೂ ನಡೆಸುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಕೈಗೊಂಡ ನಿಘಂಟಿನ ಕೆಲಸಕ್ಕೆ ಇವರಿಂದ ಹೆಚ್ಚಿನ ನೆರವು ಒದಗಿತು. 

	ಇವರು ಉತ್ತಮ ಕವಿಗಳು. ಪ್ರಾಚೀನ ಕವಿಕೃತಿಗಳಂತೆ ಕಾವ್ಯವನ್ನು ರಚಿಸಬಲ್ಲ ಸಾಮಥ್ರ್ಯವನ್ನು ಗಳಿಸಿದ್ದರು. ಇವರ ವರದಕರಕಮಲ ಸ್ತವಂ ಎಂಬ ಪುಟ್ಟ ಚಂಪೂಕೃತಿ ಇವರ ಪಾಂಡಿತ್ಯಕ್ಕೆ ನಿದರ್ಶನವಾಗಿದೆ. ಇವರು ಸಂಸ್ಕøತದಲ್ಲೂ ಕವಿತೆಗಳನ್ನು ರಚಿಸಿದ್ದುಂಟು. ಹಲವಾರು ಸ್ವಾಗತಪದ್ಯಗಳನ್ನೂ ಆಶುಕವಿತೆಗಳನ್ನೂ ಕನ್ನಡ-ಸಂಸ್ಕøತಗಳೆರಡರಲ್ಲೂ ರಚಿಸಿದ್ದಾರೆ. ಅಲ್ಲದೆ ಅಲ(ಹಂ) ಕೃತಿಯ ಮೋಸ, ಕವಿರತ್ನ ಮೊದಲಾದ ಕೆಲವು ಸಂಶೋಧನ ಮತ್ತು ವಿಮರ್ಶನ ಲೇಖನಗಳನ್ನೂ ಬರೆದಿದ್ದಾರೆ. ಇವರು ಉತ್ತಮ ವಾಗ್ಮಿಗಳೂ ವಿಮರ್ಶಕರೂ ಆಗಿದ್ದರು. ಆಯುರ್ವೇದ ವನ್ನೂ ಸ್ವಲ್ಪಮಟ್ಟಿಗೆ ಬಲ್ಲವರಾಗಿದ್ದರು. ಇವರು 1966 ಡಿಸೆಂಬರ್ 10ರಂದು ನಿಧನಹೊಂದಿದರು. 										
(ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ